ಚೂಡಾಕರ್ಣ
ಇದನ್ನು ಚೌಲಕರ್ಮ ಎಂದೂ ಕರೆಯುವುದುಂಟು. ಸಾಧಾರಣವಾಗಿ ಮಗು ಹುಟ್ಟಿದ ಮೂರನೆಯ ವರ್ಷದಲ್ಲಿ, ಶುಭದಿನ, ಶುಭನಕ್ಷತ್ರದಲ್ಲಿ ಈ ಸಂಸ್ಕಾರವನ್ನು ಆಚರಿಸಲಾಗುವುದು. ಚೂಡಾಕರ್ಣವನ್ನು ಎಲ್ಲ ಸ್ಮøತಿಗಳಲ್ಲಿಯೂ ನಿರೂಪಿಸಲಾಗಿದೆ. ಚೂಡಾ ಎಂದರೆ ಕೇಶಚ್ಛೇದವಾದ ಮೇಲೆ ಶಿರದ ಮೇಲೆ ಉಳಿದಿರುವ ಕೇಶ. ಇದಕ್ಕೆ ಹೋಮವುಂಟು. 4 ಪಾತ್ರೆಗಳಲ್ಲಿ ಅಕ್ಕಿ, ಜವೆ, ಮಾಷ ಮತ್ತು ಎಳ್ಳುಗಳನ್ನಿಡಬೇಕು. ಶಿಶುವನ್ನು ತಾಯಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ತನ್ನ ಪತಿಯೊಂದಿಗೆ ಹೋಮ ಮಾಡಬೇಕು. ಶಮಿ, ಗೋಮಯ, ದರ್ಭೆಗಳನ್ನೂ, ಉದುಂಬರ ವೃಕ್ಷದ ಕತ್ತಿ ಇಲ್ಲವೆ, ಕ್ಷೌರದ ಕತ್ತಿಯನ್ನೂ ಹೋಮ ಮಾಡುವಾಗ ಎದುರಿನಲ್ಲಿ ಇಟ್ಟುಕೊಳ್ಳಬೇಕು. ಅನಂತರ ತಂದೆಯಾದವ ಮಂತ್ರಪೂರ್ವಕವಾಗಿ ಮಗುವಿನ ಶಿರೋಭಾಗದ ಕೇಶವನ್ನು ಕತ್ತರಿಸಬೇಕು. ಹಾಗೆಯೇ ಎಡಭಾಗದಲ್ಲಿಯೂ ಕತ್ತರಿಸಬೇಕು. ಹೀಗೆ ಕತ್ತರಿಸಿದ ಕೇಶವನ್ನು ಶಮೀಪತ್ರದೊಂದಿಗೆ ತಾಯಿಯಾದವಳು ತೆಗೆದುಕೊಳ್ಳಬೇಕು. ಮಂತ್ರವನ್ನು ಉಚ್ಚರಿಸುತ್ತ ಹೀಗೆ 4 ಸಲ ಕತ್ತರಿಸಿದ ಅನಂತರ ಕ್ಷೌರಿಕನಿಂದ ಸರಿಮಾಡಿಸಿ ಮಗುವಿಗೆ ಅಭ್ಯಂಜನ ಮಾಡಿಸಬೇಕು. ಮಂತ್ರೋಚ್ಚಾರದಿಂದ ಕತ್ತರಿಸಿದ ಕೇಶವನ್ನು ಗೋಶಾಲೆಯಲ್ಲಿ ಇಲ್ಲವೆ ಸರೋವರದಲ್ಲಿ ಇಲ್ಲ ಉದುಂಬರ ವೃಕ್ಷದ ಅಡಿಯಲ್ಲಿ ಹಾಕಬೇಕು. ಕ್ಷೌರಿಕನಿಗೆ ವಸ್ತ್ರಾದಿಗಳನ್ನು ದಾನಮಾಡಬೇಕು. ಬ್ರಾಹ್ಮಣರಿಗೆ ಭೋಜನ ಮಾಡಿಸಿ ದಾನ ದಕ್ಷಿಣೆಗಳನ್ನು ಕೊಡಬೇಕು. ಹಿಂದೆ ಹೆಣ್ಣು ಗಂಡುಮಕ್ಕಳಿಬ್ಬರಿಗೂ ಈ ಸಂಸ್ಕಾರವಿತ್ತು. ಹೆಣ್ಣುಮಕ್ಕಳಿಗೆ ಕೇಶಚ್ಛೇದ ಮಾಡುವಾಗ ಮಂತ್ರವಿಲ್ಲ. ಕೆಲವು ಸ್ಮøತಿಗಳು ಉಪನಯನ ಕಾಲದಲ್ಲಿಯೇ ಇದನ್ನು ಮಾಡಬಹುದೆಂದು ಹೇಳಿವೆ. ಸ್ವಲ್ಪ ಕೇಶವನ್ನು ಅಂದರೆ ಶಿಖೆಯನ್ನು ಇಟ್ಟುಕೊಳ್ಳಬೇಕೆಂದೂ ಅದು ಕತ್ತರಿಸಿ ಹೋದರೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದೂ ಸ್ಮøತಿಗಳು ಹೇಳಿವೆ. ಶಿಖೆಯನ್ನು ಬಿಡುವ ಸ್ಥಾನದಲ್ಲಿಯೇ ಪ್ರಾಣಕ್ಕೆ ಆಧಾರವಾದ ಶಕ್ತಿಯಿರುವುದರಿಂದ ಅದನ್ನು ಶಿಖೆಯಿಂದ ಕಾಪಾಡಬೇಕೆಂಬ ಅಭಿಪ್ರಾಯವೂ ಇದೆ.

ಕೇಶಚ್ಛೇದನದಿಂದ ಮಾನವನಿಗೆ ಶುಚಿತ್ವ ಲಭಿಸುತ್ತದೆ: ಆರೋಗ್ಯ ಸೌಂದರ್ಯಗಳು ಹೆಚ್ಚುತ್ತವೆ. 														(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ